ಅಧಿರಾಜ್ಯಪದ
	
ಸ್ವಯಮಾಡಳಿತವನ್ನು ಹೊಂದಿದ್ದರೂ ಸಾರ್ವಭೌಮತ್ವವನ್ನು ಹೊಂದಿರದೆ ಬೃಹದ್ ಸಾಮ್ರಾಜ್ಯವೊಂದರ ಅಧೀನದಲ್ಲಿ ನಾಮಮಾತ್ರ ಉಳಿದಿರುವ ರಾಷ್ಟ್ರದ ಸ್ಥಿತಿಯನ್ನು ಈ ಪದದಿಂದ ವರ್ಣಿಸುತ್ತಾರೆ (ಡೊಮಿನಿಯನ್ ಸ್ಟೇಟಸ್). ಬ್ರಿಟಿಷ್ ಸಾಮ್ರಾಜ್ಯದ ಅಂಗ ರಾಜ್ಯಗಳಾಗಿ ಸ್ವಯಮಾಡಳಿತವನ್ನು ಪಡೆದಿದ್ದ ಕೆಲವು ರಾಷ್ಟ್ರಗಳನ್ನು 1907ರಲ್ಲಿ ಅಧಿರಾಜ್ಯಪದ ಪಡೆದ ರಾಜ್ಯಗಳೆಂದು ಮಾನ್ಯ ಮಾಡಲಾಯಿತು. ವಿಶೇಷ ಸ್ವಾತಂತ್ಯ್ರವನ್ನು ಪಡೆದ ಇಂಥ ರಾಜ್ಯಗಳನ್ನು ಒಳರಾಷ್ಟ್ರಗಳೆಂದೂ ಕರೆಯಲಾಯಿತು. ಕೆನಡ, ಆಸ್ಟ್ರೇಲಿಯ, ನ್ಯೂಜಿóಲೆಂಡ್, ದಕ್ಷಿಣ ಆಫ್ರಿಕ ಮುಂತಾದವು ಈ ವರ್ಗಕ್ಕೆ ಸೇರಿದ ರಾಷ್ಟ್ರಗಳು. 1907ರ ಇಂಪೀರಿಯಲ್ ಕಾನ್‍ಫರೆನ್ಸ್‍ನಲ್ಲಿ ಸ್ವಯಮಾಡಳಿತವನ್ನು ಪಡೆದಿದ್ದ ಅಂಗ ರಾಜ್ಯಗಳು ಮತ್ತು ವಸಾಹತುಗಳಿಗೆ ಪ್ರಮುಖ ಸ್ಥಾನವನ್ನು ಕೊಡಲಾಯಿತಲ್ಲದೆ ಅವುಗಳನ್ನು ಅಧಿರಾಜ್ಯಗಳೆಂದು ಅಧಿಕೃತವಾಗಿ ಮಾನ್ಯ ಮಾಡಲಾಯಿತು. ನಾಲ್ಕು ವರ್ಷಗಳಿಗೊಮ್ಮೆ ಸೇರುತ್ತಿದ್ದ ಇಂಪೀರಿಯಲ್ ಕಾನ್ಫರೆನ್ಸ್‍ನ ಸಭೆಗಳಲ್ಲಿ ಅಧಿರಾಜ್ಯಗಳು ಬ್ರಿಟಿಷ್ ಸರ್ಕಾರದ ವಿದೇಶಾಂಗ ನೀತಿ ಮತ್ತು ರಕ್ಷಣಾವ್ಯವಸ್ಥೆ ನಿರೂಪಣೆಯಲ್ಲಿ ಭಾಗವಹಿಸಲು ಅವಕಾಶ ಕೊಡಲಾಯಿತು. ಮೊದಲನೆಯ ಮಹಾಯುದ್ಧದ ಆಪತ್ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಲ್ಲಿಸಿದ ಸೇವೆ ಸಹಾಯಗಳಿಗಾಗಿ ಅಧಿರಾಜ್ಯಗಳಿಗೆ ಇನ್ನೂ ಹೆಚ್ಚಿನ ಸ್ವಾತಂತ್ರ್ಯ ಮತ್ತು ಪ್ರಾಮುಖ್ಯವನ್ನು ಕೊಡಲಾಯಿತು. ಅಧಿರಾಜ್ಯಪದ ರಾಷ್ಟ್ರಗಳಿಗೂ ಮತ್ತು ಭಾರತದಂಥ ಕೇವಲ ವಸಾಹತುಗಳಾಗಿದ್ದ ರಾಷ್ಟ್ರಗಳಿಗೂ ಸ್ಥಾನಮಾನ ಮತ್ತು ಸರ್ಕಾರ ಪದ್ಧತಿಗಳಲ್ಲಿ ಹೆಚ್ಚು ತಾರತಮ್ಯವಿದ್ದಿತು. ಅಧಿರಾಜ್ಯಪದ ಸಹಜವಾಗಿಯೇ ವಸಾಹತುಗಳಿಗಿಂತ ಹೆಚ್ಚು ಉತ್ತಮ ಮತ್ತು ಗೌರವಯುತವಾಗಿದ್ದಿತು. ಲೀಗ್ ಆಫ್ ನೇಷನ್ಸ್‍ನಂಥ ಅಂತರರಾಷ್ಟ್ರೀಯ ಸಂಘಗಳಲ್ಲಿ ಈ ರಾಜ್ಯಗಳು ಪ್ರತ್ಯೇಕ ಸದಸ್ಯತ್ವವನ್ನು ಪಡೆಯಬಹುದಾಗಿದ್ದಿತು. ಆಂತರಿಕ ಆಡಳಿತದಲ್ಲಿಯೇ ಅಲ್ಲದೆ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿಯೂ ಈ ರಾಜ್ಯಗಳು ಸ್ವತಂತ್ರರೀತಿಯಲ್ಲಿ ವರ್ತಿಸುತ್ತ ಬಂದುವು. ಈ ಕಾರಣದಿಂದಲೇ ಭಾರತದ ಹಲವು ಮುಖಂಡರು ಸ್ವಾತಂತ್ರ್ಯ ಚಳವಳಿಯ ಪ್ರಾರಂಭದಲ್ಲಿ ಅಧಿರಾಜ್ಯಪದವನ್ನು ದೊರಕಿಸಿಕೊಳ್ಳುವುದನ್ನೇ ತಮ್ಮ ಗುರಿಯನ್ನಾಗಿಟ್ಟುಕೊಂಡರು.
	
ಇಂಪೀರಿಯಲ್ ಕಾನ್ಫರೆನ್ಸ್‍ನಲ್ಲಿ ಬ್ರಿಟಿಷ್ ಸರ್ಕಾರದ ವಿದೇಶಾಂಗ ನೀತಿ ಮತ್ತು ರಕ್ಷಣಾವ್ಯವಸ್ಥೆಯ ನಿರೂಪಣೆಯ ಸಂಬಂಧವಾಗಿ ಚರ್ಚಿಸಲು ಸಾಮ್ರಾಜ್ಯದ ಕೆಲವು ರಾಜ್ಯಗಳು ಮಾತ್ರ ಭಾಗವಹಿಸಲು ಅವಕಾಶ ಕೊಡಲಾಗಿದ್ದಿತು. ಆದರೆ ಭಾರತಕ್ಕೆ ಇಂಥ ಅವಕಾಶ ದೊರೆಯಲಿಲ್ಲ. ಮೊದಲನೆಯ ಮಹಾ ಯುದ್ಧದಲ್ಲಿ ಭಾರತ ಸಲ್ಲಿಸಿದ ಸೇವೆ ಸಹಕಾರಗಳಿಗಾಗಿ 1917ರ ಇಂಪೀರಿಯಲ್ ಕಾನ್‍ಫóರೆನ್ಸ್ ಸಭೆಯಲ್ಲಿ ಭಾರತಕ್ಕೂ ಅಧಿರಾಜ್ಯಪದವನ್ನು ಶಿಫಾರಸು ಮಾಡಲಾಯಿತು. ಈ ಉದ್ದೇಶಪೂರ್ತಿಗಾಗಿ ಭಾರತದಲ್ಲಿ ಮೊದಲು ಸ್ವಯಮಾಡಳಿತ ವ್ಯವಸ್ಥೆ ಅವಶ್ಯವಾಗಿದ್ದಿತು. 1917ರ ಆಗಸ್ಟ್ ತಿಂಗಳ ತಮ್ಮ ಘೋಷಣೆಯಲ್ಲಿ ಭಾರತೀಯರಿಗೆ ಸ್ವಯಮಾಡಳಿತವನ್ನು ಹೊಂದಲು ಅವಕಾಶ ಮಾಡಿಕೊಡುವುದಾಗಿ ಮಾಂಟೆಗೊ ಸಾರಿದರು. 1919ರ ಅನಂತರ ಲೀಗ್ ಆಫ್ó ನೇಷನ್ಸ್‍ನಲ್ಲಿ ಭಾರತದ ನಿಯೋಗಕ್ಕೆ ಸ್ಥಾನ ದೊರೆಯಿತು. ಆದರೆ ತದನಂತರ ಬ್ರಿಟಿಷ್ ಸರ್ಕಾರದ ಧೋರಣೆಗಳಿಂದಾಗಿ ಅಧಿರಾಜ್ಯವಾಗಿ ಭಾರತಕ್ಕೆ ದೊರೆಯಬಹುದಾದ ಸ್ಥಾನಮಾನಗಳ ಬಗ್ಗೆ ಭಾರತೀಯ ಮುಖಂಡರು ಮತ್ತು ಬ್ರಿಟಿಷ್ ಸರ್ಕಾರದ ನಡುವೆ ಮತ್ತು ಭಾರತೀಯರಲ್ಲಿಯೇ ಭಿನ್ನಾಭಿಪ್ರಾಯಗಳು ಬೆಳೆದುವು. ಈ ಮಧ್ಯೆ ಮಹಾತ್ಮಾ ಗಾಂಧಿಯವರು ಪೂರ್ಣ ಸ್ವರಾಜ್ಯವೇ ತಮ್ಮ ಗುರಿಯೆಂದು ಸಾರಿದರು. ಬ್ರಿಟಿಷ್ ಸರ್ಕಾರ ಭಾರತಕ್ಕೆ ಅಧಿರಾಜ್ಯಪದವನ್ನು ಕೊಡುವುದಾಗಿ ತಿಳಿಸಿದ್ದಿತಾದರೂ ಅದೇ ಪದದ ಇತರ ರಾಷ್ಟ್ರಗಳೊಡನೆ ಸರಿಸಮಾನ ಸ್ಥಾನಮಾನವನ್ನು ಮಾನ್ಯಮಾಡಲು ಸಿದ್ಧವಿರಲಿಲ್ಲದ್ದೇ ಇದಕ್ಕೆ ಕಾರಣ. ಭಿನ್ನಾಭಿಪ್ರಾಯಗಳು ಹೆಚ್ಚಿದಂತೆಲ್ಲ ಬ್ರಿಟಿಷ್ ಸರ್ಕಾರ ಅದನ್ನೇ ನೆಪವಾಗಿ ಮಾಡಿ ತನ್ನ ಆಶ್ವಾಸನೆಯನ್ನು ಕೈಬಿಟ್ಟಿತು. 1930ರ ಸೈಮನ್ ವರದಿಯಲ್ಲಿ ಮತ್ತು 1935ರ ಭಾರತ ಸರ್ಕಾರದ ಶಾಸನದಲ್ಲಿ ಅಧಿರಾಜ್ಯಪದದ ಪ್ರಸ್ತಾಪವನ್ನೇ ಮಾಡಲಿಲ್ಲ. ಭಾರತೀಯರಿಗೆ ತಮ್ಮ ಚಳವಳಿಯನ್ನು ಮುಂದುವರಿಸುವುದರ ಹೊರತು ಇನ್ನಾವ ಮಾರ್ಗವೂ ಉಳಿಯಲಿಲ್ಲ. ಭಾರತೀಯರ ಅವಿಶ್ರಾಂತ ಹೋರಾಟದ ಫಲವಾಗಿ 1947ರ ಭಾರತ ಸ್ವಾತಂತ್ರ್ಯಶಾಸನದ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ರಾಷ್ಟ್ರಗಳು ಉದಯಿಸಿದುವಲ್ಲದೆ ಅವನ್ನು ಅಧಿರಾಜ್ಯಗಳೆಂದು ಕರೆಯಲಾಯಿತು. 1950ರಲ್ಲಿ ಜಾರಿಗೆ ಬಂದ ಭಾರತ ರಾಜ್ಯಾಂಗದ ಪ್ರಕಾರ ಗಣರಾಜ್ಯಸ್ಥಾಪನೆಯೊಂದಿಗೆ ಭಾರತದ ಅಧಿರಾಜ್ಯಪದವೂ ಕೊನೆಗೊಂಡಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ